EPF Balance: ಮಿಸ್ಡ್ ಕಾಲ್ ಕೊಟ್ಟು ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಹೇಗೆ? ಇಲ್ಲಿದೆ ವಿವರ
Check Your EPF Balance by just a Missed Call
ಸುಗ್ಗನಹಳ್ಳಿ ವಿಜಯಸಾರಥಿ Mar 08, 2023 | 5:14 PM - tv9 Kannada
Missed Call To Check PF Amount: ನಿಮ್ಮ ಇಪಿಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಎಂದು ತಿಳಿಯುವುದು ಈಗ ಬಹಳ ಸುಲಭ. ಇದಕ್ಕೆ ಹಲವು ವಿಧಾನಗಳುಂಟು. ಅದರಲ್ಲಿ ಮೊಬೈಲ್ನಿಂದ ಮಿಸ್ಡ್ ಕಾಲ್ ಕೊಡುವ ಸೌಲಭ್ಯ ಬಹಳ ಜನಪ್ರಿಯ ಎನಿಸಿದೆ. ಈ ಬಗ್ಗೆ ವಿವರ:
ಉದ್ಯೋಗಿಗಳ ಭವಿಷ್ಯ ನಿಧಿ (Employee Provident Fund) ಅಥವಾ ಇಪಿಎಫ್ ಕೇಂದ್ರ ಸರ್ಕಾರದ ಇಪಿಎಫ್ಒದಿಂದ (EPFO) ನಿರ್ವಹಿಸಲಾಗುತ್ತಿರುವ ಒಂದು ಪ್ರಮುಖ ಉಳಿತಾಯ ಯೋಜನೆ. ಉದ್ಯೋಗಿಗಳ ಜೀವನ ಭದ್ರತೆಗೆಂದು ರೂಪಿಸಲಾಗಿರುವ ಯೋಜನೆ ಇದು. ರೆಗ್ಯುಲರ್ ಎಂಪ್ಲಾಯೀ ಆಗಿ ನೇಮಕವಾದವರೆಲ್ಲರಿಗೂ ಸಾಮಾನ್ಯವಾಗಿ ಲಭ್ಯ ಇರುವ ಯೋಜನೆ ಇದು. ಉದ್ಯೋಗಿಯ ಬೇಸಿಕ್ ಸಂಬಳ ಮತ್ತು ಭತ್ಯೆ (DA- Dearness Allowance) ಮೊತ್ತದ ಶೇ. 12ರಷ್ಟು ಹಣ ಆ ಉದ್ಯೋಗಿಯ ಇಪಿಎಫ್ ಖಾತೆಗೆ ಪ್ರತೀ ತಿಂಗಳೂ ಸಂದಾಯವಾಗುತ್ತಾ ಹೋಗುತ್ತದೆ. ಈಗಂತೂ ಪ್ರತಿಯೊಬ್ಬ ಉದ್ಯೋಗಿಗೂ ಯುಎಎನ್ ನಂಬರ್ ಒದಗಿಸಲಾಗುತ್ತದೆ. ಈ ಯುಎಎನ್ ನಂಬರ್ ಅಡಿಯಲ್ಲಿ ಇಪಿಎಫ್ ಖಾತೆ ಸೃಷ್ಟಿಯಾಗುತ್ತದೆ. ನೀವು ಕಂಪನಿ ಬದಲಿಸಿದಾಗ ಹೊಸ ಇಪಿಎಫ್ ಖಾತೆ ಸೃಷ್ಟಿಯಾದರೂ ಯುಎಎನ್ ನಂಬರ್ ಅದೇ ಇರುತ್ತದೆ. ವಿವಿಧ ಪಿಎಫ್ ಖಾತೆಗಳನ್ನು ವಿಲೀನಗೊಳಿಸಿ ಒಂದೇ ಖಾತೆಯಾಗಿ ಉಳಿಸಿಕೊಳ್ಳುವ ಅವಕಾಶವೂ ಇದೆ.
ಈ ರೀತಿಯಾಗಿ ಇಪಿಎಫ್ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ. ಪಿಎಫ್ ಖಾತೆಯಲ್ಲಿರುವ ಹಣ ಎಷ್ಟಿದೆ ಎಂದು ತಿಳಿದುಕೊಳ್ಳಲು, ಹಣ ಹಿಂಪಡೆಯುವುದು, ಮುಂಗಡ ಪಡೆಯುವುದು ಇತ್ಯಾದಿ ಹಲವು ಸವಲತ್ತುಗಳಿವೆ. ಉಮಂಗ್ ಇತ್ಯಾದಿ ಆ್ಯಪ್ಗಳ ಮೂಲಕ ನಮ್ಮ ಪಿಎಫ್ ಖಾತೆಯ ಇಡೀ ವಿವರಗಳನ್ನು ನೋಡಬಹುದು, ವಿವಿಧ ಇಪಿಎಫ್ ಸೇವೆಗಳನ್ನೂ ಆನ್ಲೈನ್ ಮೂಲಕವೇ ಪಡೆಯಬಹುದು. 12 ಅಂಕಿಗಳ ಯುಎಎನ್ ನಂಬರ್ ಅನ್ನು ಆಧಾರ್ ನಂಬರ್ ಜೊತೆ ಜೋಡಿಸಿರುವುದರಿಂದ ಎಲ್ಲವೂ ಒಂದೇ ಪ್ಲಾಟ್ಫಾರ್ಮ್ನಲ್ಲಿ ಲಭ್ಯ ಇರುತ್ತದೆ. ಎಸ್ಸೆಮ್ಮೆಸ್ ಮೂಲಕವೋ ಅಥವಾ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಮಿಸ್ಡ್ ಕಾಲ್ (Missed Call Facility) ಕೊಡುವ ಮೂಲಕವೂ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂದೂ ತಿಳಿದುಕೊಳ್ಳಬಹುದು. ಅದು ಹೇಗೆಂದು ಇಲ್ಲಿದೆ ವಿವರ…
ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ತಿಳಿಯುವುದು ಹೀಗೆ:
ಯುಎಎನ್ ಪೋರ್ಟಲ್ನಲ್ಲಿ ನೊಂದಾಯಿಸಲಾದ ಇಪಿಎಫ್ ಸದಸ್ಯರು ತಮ್ಮ ನೊಂದಾಯಿತ ಮೊಬೈಲ್ ನಂಬರ್ನಿಂದ ಮಿಸ್ಡ್ ಕಾಲ್ ಕೊಟ್ಟರೆ ಪಿಎಫ್ ಬ್ಯಾಲನ್ಸ್ ತಿಳಿಯಬಹುದು. 9966044425 ಈ ನಂಬರ್ಗೆ ಮಿಸ್ಡ್ ಕಾಲ್ ಕೊಟ್ಟರೆ ನಿಮ್ಮ ಈಗಿನ ಪಿಎಫ್ ಖಾತೆಯಲ್ಲಿರುವ ಹಣದ ಮೊತ್ತ ಎಷ್ಟೆಂದು ಗೊತ್ತಾಗುತ್ತದೆ. ನೀವು ಕೆಲಸ ಮಾಡುವ ಕಂಪನಿಯು ನಿಮ್ಮ ಯುಎಎನ್ ನಂಬರ್, ಆಧಾರ್, ಪಾನ್ ನಂಬರ್, ಬ್ಯಾಂಕ್ ಖಾತೆ ಇವುಗಳನ್ನು ನೊಂದಾಯಿಸಿರುತ್ತಾದ್ದರಿಂದ ಈ ಸೌಲಭ್ಯ ಸಾಧ್ಯವಾಗುತ್ತದೆ.
ಯುಎಎನ್ ಪೋರ್ಟಲ್ನಲ್ಲಿ ನೊಂದಾಯಿಸಿರಬೇಕು
ಯುಎಎನ್ ಅಥವಾ ಯೂನಿವರ್ಸಲ್ ಅಕೌಂಟ್ ನಂಬರ್ನ ಡಿಡಿಕೇಟೆಡ್ ಪೋರ್ಟಲ್ ಇರುತ್ತದೆ. ಅಲ್ಲಿ ಹೋಗಿ ನಿಮ್ಮ ಯುಎಎನ್ ನಂಬರ್ಗೆ ಮೊಬೈಲ್ ನಂಬರ್ ಅನ್ನು ಆ್ಯಕ್ಟಿವೇಟ್ ಮಾಡಬೇಕು.
ಪೋರ್ಟಲ್ನಲ್ಲಿ ಕೆವೈಸಿ ಸರಿಯಾಗಿರಬೇಕು. ಅಂದರೆ ನಿಮ್ಮ ಯುಎಎನ್ ನಂಬರ್ಗೆ ಬ್ಯಾಂಕ್ ಖಾತೆ ಸಂಖ್ಯೆಯೋ, ಆಧಾರ್ ನಂಬರೋ ಅಥವಾ ಪಾನ್ ಕಾರ್ಡೋ ಈ ದಾಖಲೆಗಳನ್ನು ಒದಗಿಸಿರಬೇಕು.
ಇವಾಗಿದ್ದರೆ ನೀವು 9966044425 ನಂಬರ್ಗೆ ಮಿಸ್ಡ್ ಕಾಲ್ ಕೊಡಬಹುದು. ನೀವು ಕಾಲ್ ಮಾಡಿದಾಗ ಅದು ಒಂದು ಕ್ಷಣ ರಿಂಗ್ ಆಗಿ ಸ್ವಯಂ ಆಗಿಯೇ ಡಿಸ್ಕನೆಕ್ಟ್ ಆಗುತ್ತದೆ. ಬಳಿಕ ಎಸ್ಸೆಮ್ಮೆಸ್ ಮೂಲಕ ನಿಮಗೆ ಪಿಎಫ್ ಬ್ಯಾಲನ್ಸ್ ಎಷ್ಟೆಂದು ಮಾಹಿತಿ ಮೊಬೈಲ್ಗೆ ಬರುತ್ತದೆ.
Comments
Post a Comment
Please write your comments, suggestions and feedback.