KARTYOL


KARTYOL


ಬಹುಶಃ ಈಗಾಗಲೇ ನಮ್ಮ ಪುಸ್ತಕಗಳು ಹಳದಿಯ Marlboro plastic ಲಕೋಟೆಗಳನ್ನು ನುಸುಳಿ ಆಗಿರುತ್ತಿತ್ತು. ಇದು ಲಕೋಟೆಯ ಒಳಗೆ ಪುಸ್ತಕವಿಟ್ಟು ನಂತರ ಚೀಲಕ್ಕೆ ತುಂಬಿಸುವ ಕಾಲ.ಹುಡುಗರು ಬೇಗನೆ ಸಿಕ್ಕ ಯಾವುದಾದರು ಬಣ್ಣದ ಎರಡು ಲಕೋಟೆಗಳನ್ನು ಸಂಗ್ರಹಿಸಿದರೆ ಹುಡುಗಿಯರಿಗೆ ತುಸು ವಿಳಂಬ ಏಕೆಂದರೆ  ಲಕೋಟೆ Pink ಬಣ್ಣದಲ್ಲೂ ಲಭ್ಯವಿದೆ! ಆಗೇನೂ Waterproof School Bagಗಳು ಲಗ್ಗೆಯಿಟ್ಟಿರಲಿಲ್ಲ. ನಮ್ಮ ತಯಂದಿರು Branchಗೆ ಬೀಡಿ ಕೊಂಡುಹೋಗುತ್ತಿದ್ದದ್ದು ಇದೇ ಲಕೋಟೆಗಳಲ್ಲಿ. ಹದಿನೈದು ವರ್ಷಗಳ ಹಿಂದೆ ಪ್ರತಿ ಅಂಗಡಿಯಲ್ಲೂ ತೂಗುಹಾಕಿರುತ್ತಿದ್ದ ಇಂತಹ ಲಕೋಟೆಗಳು ಇಂದು ಊರಿನ ಒಂದಿ ಅಂಗಡಿಯಲ್ಲಿ ಸಿಗುವ ವಿಶೇಷ ಆಯುರ್ವೇದಿಕ್ ಧಾತುವಿನಂತೆ ಮಾರ್ಪಾಡಾಗಿದೆ. ಗಾರೆ ಕೆಲಸ ಮುಗಿಸಿ Bus ಹತ್ತುವವರ ಎಡ ಕಂಕುಳಲ್ಲಿ ಭದ್ರವಾಗಿರುತ್ತಿದ್ದ ಗಟ್ಟಿಮುಟ್ಟಾದ ಲಕೋಟೆ, ಇಂದು ಒಂದು ಸೇರು ಅಕ್ಕಿ ಹಾಕಿ 
ಹಿಡಿದುಕೊಂಡಾಗ Chewing Gumನಂತೆ ಅದರ ಹಿಡಿ ವಿಸ್ತರಿಸಿ ಹರಿದುಹೋಗುತ್ತಿದೆ.

ಬೆಳಗ್ಗೆ ಎದ್ದು ಅಡುಗೆ ಮನೆಯ ಉರಿಯುತ್ತಿರುವ ಒಲೆಯ ಮುಂದೆ Tooth Brush ಹಿಡಿದು ಕೊಕ್ಕರೆ ಕುಳಿತುಕೊಳ್ಳುದು, ಅಮ್ಮ ತಂದಿಟ್ಟ ತೆಂಗಿನ ಗರಿಗಳನ್ನು ಅವರ ಕಣ್ಣು ತಪ್ಪಿಸಿ ಒಂದೊAದೇ ಸುಡುವುದು, ಗರಿಯ ತುದಿಗೆ ಬೆಂಕಿ ಹೊತ್ತಿಸಿ ಅದು ಆರುವಷ್ಟರಲ್ಲಿ ಕಿಟಕಿಯ ಬುಡದಲ್ಲಿ ಇಟ್ಟ ಸೀಮೆಯೆಣ್ಣೆ ದೀಪವನ್ನು ಉರಿಸುವ ಭಾರೀ ಸಾಹಸದ ಪ್ರಯತ್ನ, ಕೊಡದಲ್ಲಿ ಇಟ್ಟಿರುವ ನೀರನ್ನು ಒಲೆಯ ಮೇಲಿಟ್ಟು ಕೆಸುವಿನ ದಿಂಡಿನಲ್ಲಿ ಎಣ್ಣೆ ಸವರಿರುವ ದೋಸೆಯ ಕಾವಲಿಗೆ ಎರಚುವಾಗ ಸಿಗುವ ಸುಖ, ಮುಂಗಾರಿನ ಎಡೆಬಿಡದ ಮಳೆಯ ಚಳಿಗೆ ಒಲೆಯ ಎದುರಿನೊಂದ ಮೇಲೇಲಲು ಆಗುವ ಉದಾಸೀನತೆ, ಹಲ್ಲುಜ್ಜಿಕೊಂಡು ನೊರೆಯನ್ನು ಹರಿಯುತ್ತಿರುವ ನೀರಿಗೆ ಉಗುಳಿ ಅದರ ಕದಡುವಿಕೆಯನ್ನು ನೋಡುವುದು, ಹಿಂದೆ ಕೈ ಕಟ್ಟಿ ಗೋಡೆಗೆ ಒರಗಿ T.V ವಾರ್ತೆಯಲ್ಲಿ ರಜೆಯ ಸೂಚನೆಯಿದೆಯೇ ಎಂದು ಕುತೂಹಲದಿಂದ ಕಾಯುವುದು. ಆತುರದಿಂದ ವಾರ್ತೆಯನ್ನೂ ಕೇಳಿಕೊಂಡು ಪರದೆಯ ಕೆಳಭಾಗದಲ್ಲಿ ಬರುವ ಮುಖ್ಯಾಂಶಗಳನ್ನೂ ಒಂದೇ ಸಮಯದಲ್ಲಿ ಓದಿದಾಗಲೇ ಗೊತ್ತಾದದ್ದು ನಮ್ಮ ಮಿದುಳು Multi Tasking ಎಂದು!
JCBಯ ಬೆಂಬಿಡದ ಕೊಕ್ಕರೆಗಳಂತೆ Tillerನ ಹಿಂದೆ ನಡಿಯುವ ಮಕ್ಕಳ ಸಾಲು, ಗದ್ದೆಯ ಬದಿಯ ದಂಡೆಯಲ್ಲಿ ಬಟ್ಟೆ ಒಗೆಯುವ ತಾಯಂದಿರು, ಬಟ್ಟೆಯೊಗೆಯಲು ತಂದ ಸಾಬೂನಿನ ಡಬ್ಬದಲ್ಲಿ ನೀರುತುಂಬಿಸಿ ಆಡುವ, ಶಲ್ಯವನ್ನು ಕೊನೆಗೆ ಒಗೆಯಲು ಇಟ್ಟು ಅಲ್ಲಿಯವರೆಗೂ ಅದರಲ್ಲಿ ಮೀನು ಹಿಡಿಯುವ ಮೀಸೆ ಚಿಗುರುವ ಹುಡುಗರು, ಗದ್ದೆಯ ಹುಣಿಬದಿ ಎಳೆಯುವ ಶಬ್ಧ, ಊಳಲು ನೀರು ತುಂಬಿಸುವ ಮೊದಲು ಹೆಗ್ಗಣಗಳು ಮಾಡಿರುವ ತೂತುಗಳನ್ನು ಮುಚ್ಚುವುದು, ಗದ್ದೆಗೆ ನೆರಳಾಗುವ ಮರದ ರೆಂಬೆಗಳನ್ನು ಕತ್ತರಿಸುವುದು, ಅಣಬೆ ಜಾಡು ಹಿಡಿದು ಪೊದೆ-ಪೊದೆ ಸುತ್ತುವವರು, ಹಾವಸೆಯಲ್ಲಿ ಜಾರಿ ಬೀಳುತ್ತಿರುವವರನ್ನು 
Live ಆಗಿ ನೋಡಿದ ಖುಷಿ, ಶಾಲೆಗೆ ಹೋಗುತ್ತಿರುವಾಗ ಗಾಳಿಗೆ ಮೇಲ್ಮುಖವಾಗಿ ಅರಳುವ ಛತ್ರಿ, ಮಳೆಗೆ ಚೀಲವನ್ನು ಎದುರು ಹಾಕಿಕೊಂಡು ಮಾಡುವ ಜೋಪಾನ, Lunar's ಉಂಗುಷ್ಟದ ಚಪ್ಪಲಿಯಿಂದ ಚಡ್ಡಿಯ ತುಂಬೆಲ್ಲಾ ಎರಚಿದ ಕೆಸರು, ಮಳೆ ನಿಂತುಹೋದ ಸಂಜೆಯಲ್ಲಿ ಊರಿನ ತುಂಬೆಲ್ಲಾ ಹರಡುವ ಬಚ್ಚಲು ಮನೆಯ ಹೊಗೆ, ಗದ್ದೆ-ತೋಟದ ಬದಿಗೆ ಮನೆ ಇರುವವರಿಗೆ ಮಾತ್ರವೇ ಅನುಭವಕ್ಕೆ ಬರುವ ಕಪ್ಪೆಗಳ Orchestra, ರಾತ್ರಿದಾರಿಯಲ್ಲಿ ಗೊತ್ತಿಲ್ಲದೆ ಕಪ್ಪೆಗೆ ಮೆಟ್ಟಿ ಅಥವಾ ದೊಡ್ಡ ಗಾತ್ರದ   ಕಪ್ಪೆಗಳನ್ನು ನೋಡಿ ಅವಕ್ಕಾಗುವುದು, ಬಟ್ಟೆ ಒಣಗಿಸಲು ಪಡುವ ಪಾಡು, ಅಗಸನ ಉಗ್ರಾಣದಂತಾಗುವ ಮನೆ, ಊರವರೊಂದಿಗೆ Electric Line ಕಡಿಯಲು ಹೋಗುವುದು,
ರಾತ್ರಿಯಾಗುತ್ತಲೇ ಊರವರೆಲ್ಲಾ ಸೇರಿ ದಾರಿಯ ಬದಿಯ ಮರದಲ್ಲಿ ಅಪಾಯಕಾರಿಯಾಗಿರುವ ಕಣಜದ ಗೂಡಿಗೆ ಬೆಂಕಿಯಿಡಲು ಹೋಗುವುದು, ಏಡಿ ಕಡಿಯುದು, ಲೈಟು ಶಿಕಾರಿ, ಮೀನೆಂದು ಕೇರೆ ಹಾವಿನ ಬಾಲಕ್ಕೆ ಕಡಿಯುವ ಕುಡುಕರು, ಉಬೇರ್, ಮಳೆಗಾಲಕ್ಕೆಂದು ತೆಗೆದ ಟೋಪಿಯಲ್ಲಿ ಮೈಲುತುತ್ತಿನ ಚಿತ್ತಾರ, ಜಾತಿ ಮರಗಳ ರೆಂಬೆ ಕತ್ತರಿಸುವುದು, ಮಳೆಗಾಲದ ನಟ್ಟಿಕಾಯಿ, ಗದ್ದೆ ವ್ಯವಸಾಯ ತುಂಬೆಲ್ಲಾ ಕಾಡುವ ಕಾಲಿನ ಉಗುರುಸುತ್ತು, ಹುಣಿಯಲ್ಲಿ ಆಯತಪ್ಪಿ ಗದ್ದೆಗೆ ಬೆದ್ದವರು, ನರ್ತೆ ಹೆಕ್ಕುವುದು, ರಾತ್ರಿ ಕಿಟಕಿ ಬದಿಗೆ ಹಾಸಿಗೆಯಲ್ಲಿ ಮುಸುಕು ಹಾಕಿ ಜೋರು ಮಳೆಯ ಸದ್ದನ್ನು ಕೇಳಿಕೊಂದು ಸಿಡಿಲಿನ ಶಬ್ಧಕ್ಕೆ ಹೆದರಿ ಕವಚಲು ಮಲಗುವುದು, ಒದ್ದೆಯಾದ ಚಪ್ಪಲಿ ಹಾಕಲು ಆಗುವ ಉದಾಸೀನತೆ, ಪೇಟೆಗೆ ಹೋಗುವವರು ದಂಡೆಯ ನೀರಿನಲ್ಲಿ ಕೆಸರಾದ ಚಪ್ಪಲಿಯನ್ನು ತೊಳೆದುಕೊಂಡು ಹೋಗುವ ದೃಶ್ಯ ಇವೆಲ್ಲಾ ಕಾಣಲು ಸಿಗಲು ಪ್ರಾರಂಭವಾಗುವುದು 'ಕಾರ್ತ್ಯೊಲ್'ನಲ್ಲೆ.

ಮುಂಗಾರಿನ ಮಳೆ ಎಲ್ಲರಿಗೂ ಖುಷಿಯನ್ನು ಹೊತ್ತು ತರುವುದಿಲ್ಲ. ಕೆಲವರಿಗೆ ನಷ್ಟವನ್ನೂ, ಇನ್ನು ಕೆಲವರಿಗೆ ಮರಣವನ್ನೂ ಮತ್ತೆ ಕೆಲವರಿಗೆ ಬದುಕಿನಲ್ಲೇ ಮರೆಯಲಾಗದ ಕಹಿ ಅನುಭವಗಳನ್ನು ಹೊತ್ತುತರುತ್ತದೆ. ಕೆಲವರಿಗೆ ಸಿಡಿಲು ಮಳೆಯನ್ನು ಬರುವ ಮುನ್ಸೂಚನೆಯಾದರೆ, ಉಳಿದವರಿಗೆ ಕಳೆದುಹೋದ ವರುಷಗಳ ಕಹಿ ಘಟನೆಯನ್ನು
ನೆನಪಿಸಬಹುದು. ಹಸಿರು ಪ್ರಿಯರಿಗೆ ಹಚ್ಚ ಹಸುರಾಗಿ ಕಾಣವು ಮರ, ಅದರ ಪಕ್ಕದಲ್ಲಿ ಮನೆ ಮಾಡಿಕೊಂಡವರಿಗೆ ಯಮನಂತೆ ಕಾಣಬಹುದು. ಯಾವಾಗ ಮಳೆ ಹೆಚ್ಚಾಗಿ ಜಲಪಾತಗಳ ಸೌಂದರ್ಯ ಹೆಚ್ಚಿಸಿಕೊಳ್ಳುವುದೋ ಎಂದು ಆಸೆಪಡುವ ಮನಸ್ಸು ಎಂದಿಗೂ ನದಿ ಪಾತ್ರದಲ್ಲಿ, ಪ್ರಪಾತದ ಅಂಚಿನಲ್ಲಿ ಬದುಕು ಕಟ್ಟಿಕೊಂಡವರ ಬಗ್ಗೆ ಆಲೋಚಿಸುವುದಿಲ್ಲ. ಭಯಂಕರ ಗುಡುಗಿಗೆ ಬೀಳುವ ಆಲಿಕಲ್ಲನ್ನು ಅಂಗೈಯಲ್ಲಿ ಹಿಡಿದುಕೊಳ್ಳಲು ಬಯಸುವ ಮನಸ್ಸು, ಸಿಡಿಲು ತರುವ ಅಗ್ನಿಯ ಜ್ವಾಲೆಯನ್ನು ಅರಿತಿರುವುದಿಲ್ಲ. ಭದ್ರವಾಗಿರುವ ಮೇಲ್ಛಾವಣಿಯಿಂದ ಬೀಳುವ ನೀರಿಗೆ ಕಾಲೊಡ್ಡುವ ಮನಸ್ಸು ತಗಡು-ಟರ್ಪಾಲಿನ್ನ ಕೆಳಗೆ ಬಿರುಕುಬಿಟ್ಟ ಗೋಡಿಯ ಕೆಳಗೆ ಮಲಗುವವರ ಬಗ್ಗೆ ತಿಳಿದಿಲ್ಲ.

© ✍️ Ashith Rai T

Comments

Popular posts from this blog

Check Aadhaar PAN Link Status and Link with